ಶರೀರಕ್ರಿಯಾ ವಿಜ್ಞಾನ -  	ಜೀವಿಗಳಲ್ಲಿ ಮತ್ತು ಅವುಗಳ ಘಟಕಗಳಾದ ಊತಕಗಳು ಹಾಗೂ ಕೋಶಗಳಲ್ಲಿ ಜರಗುವ ಭೌತಿಕ ಮತ್ತು ರಾಸಾಯನಿಕ ಪ್ರಕ್ರಿಯೆಗಳನ್ನು ಅಭ್ಯಸಿಸುವ ವಿಜ್ಞಾನಶಾಖೆ (ಫಿಸಿಯಾಲಜಿ). ಪ್ರಾಣಿ ಮತ್ತು ಸಸ್ಯಗಳೆರಡರಲ್ಲೂ ಜರಗುವ ಜೀವಕ್ರಿಯೆಗಳ ಅಧ್ಯಯನ ಇದರ ವ್ಯಾಪ್ತಿಗೊಳಪಡುವುದರಿಂದ ಜೀವಕ್ರಿಯಾವಿಜ್ಞಾನ ಎಂಬ ಪರ್ಯಾಯ ಪದವೂ ಉಂಟು. ಪ್ರಾಣಿದೇಹಕ್ಕೆ ಅನ್ವಯಿಸಿ ಶರೀರವಿಜ್ಞಾನ ಅಥವಾ ದೇಹವಿಜ್ಞಾನ ಎಂದು ಉಲ್ಲೇಖಿಸುವುದೂ ಉಂಟು. ಸಂತಾನೋ ತ್ಪಾದನೆ, ಬೆಳೆವಣಿಗೆ, ಉಪಾಪಚಯ, ಶ್ವಸನ, ಸಾಗಾಣಿಕೆ ಇವೇ ಮೊದಲಾದ ಮೂಲ ಕ್ರಿಯೆಗಳಿಗೆ ಸಂಬಂಧಿಸಿದಂತೆ ಅಂಗವ್ಯವಸ್ಥೆಗಳು, ಅಂಗಗಳು, ಊತಕಗಳು, ಕೋಶಗಳು ಮತ್ತು ಉಪಕೋಶೀಯ ಸಂರಚನೆಗಳಲ್ಲಿ ಜರಗುವ ಪ್ರಕ್ರಿಯೆಗಳು ಇದರ ಅಧ್ಯಯನ ವಿಷಯ.

	ಅಂಗರಚನಾವಿಜ್ಞಾನದೊಂದಿಗೆ (ಅನಾಟಮಿ) ನಿಕಟ ಸಂಬಂಧಿ ಯಾದ ಈ ವಿಜ್ಞಾನಶಾಖೆಯನ್ನು ಬಲು ಹಿಂದೆ ವೈದ್ಯವಿಜ್ಞಾನದ ಶಾಖೆ ಎಂದೇ ಪರಿಗಣಿಸುತ್ತಿದ್ದರು. ಜೈವಿಕ ಯಂತ್ರತೆ ಮತ್ತು ಪ್ರಕ್ರಿಯೆಗಳನ್ನು ಅಭ್ಯಸಿಸಲು ಭೌತವಿಜ್ಞಾನ ಮತ್ತು ರಸಾಯನವಿಜ್ಞಾನಗಳ ಸಲಕರಣೆಗಳನ್ನು ಬಳಸತೊಡಗಿದ್ದರಿಂದ 19ನೆಯ ಶತಮಾನದಲ್ಲಿ ಶರೀರಕ್ರಿಯಾವಿಜ್ಞಾ ನಕ್ಕೆ ಸ್ವತಂತ್ರ ವಿಜ್ಞಾನದ ಸ್ಥಾನಮಾನ ದೊರೆಯಿತು. ತದನಂತರ ಅದರ ಅಧ್ಯಯನಕ್ಷೇತ್ರ ಬಹುವಾಗಿ ವಿಸ್ತರಿಸಿತು. ಎಂದೇ, ಶರೀರಕ್ರಿಯಾ ವಿಜ್ಞಾನದ ಮೂರು ಪ್ರಭೇದಗಳನ್ನು ಪ್ರತ್ಯೇಕವಾಗಿ ಪರಿಗಣಿಸುವುದು ರೂಢಿ: ಎಲ್ಲ ಜೀವಿಗಳಿಗೆ ಸಾಮಾನ್ಯವಾದ ಮೂಲ ಪ್ರಕ್ರಿಯೆಗಳನ್ನು ಅಭ್ಯಸಿಸುವ ಸಾರ್ವತ್ರಿಕ (ಜನರಲ್) ಶರೀರಕ್ರಿಯಾಶಾಸ್ತ್ರ; ರೋಗವಿಜ್ಞಾನವನ್ನೂ ಒಳಗೊಂಡು ಮಾನವರ ಮತ್ತು ಅನ್ಯ ಪ್ರಾಣಿಗಳಲ್ಲಿ ಜರಗುವ ಜೈವಿಕ ಪ್ರಕ್ರಿಯೆಗಳನ್ನು ಅಭ್ಯಸಿಸುವ ಮಾನವ ಅಥವಾ ಪ್ರಾಣಿಶರೀರಕ್ರಿಯಾಶಾಸ್ತ್ರ; ಸಸ್ಯಗಳಲ್ಲಿ ಜರಗುವ ಜೈವಿಕಕ್ರಿಯೆಗಳನ್ನು ಅಭ್ಯಸಿಸುವ ಸಸ್ಯಶರೀರಕ್ರಿಯಾವಿಜ್ಞಾನ.

	ಇತಿಹಾಸ: ಪದಾರ್ಥಗಳ ಸ್ವರೂಪದ ತತ್ತ್ವಶಾಸ್ತ್ರೀಯ ಅನ್ವೇಷಣೆ ಯನ್ನು ವರ್ಣಿಸಲೋಸುಗ ಕ್ರಿ.ಪೂ. 600ರ ಆಸುಪಾಸಿನಲ್ಲಿ ಶರೀರಕ್ರಿಯಾ ವಿಜ್ಞಾನ ಪದವನ್ನು ಗ್ರೀಕರು ರೂಪಿಸಿದರು. ವೈದ್ಯವಿಜ್ಞಾನದ ಹಿಪಾಕ್ರೆಟೀಯ ಪಂಥದ ಪುಸ್ತಕಗಳಲ್ಲಿ (ಕ್ರಿ.ಪೂ. 350ಕ್ಕೂ ಮುನ್ನ), ವಿಶೇಷತಃ ರೋಗದ ಶರೀರ ರಸಧಾತು ಸಿದ್ಧಾಂತ ಕುರಿತಾದ ಗ್ರಂಥ ಡೆ ನ್ಯಾಚುರ ಹೋಮಿನಿಸ್‍ನಲ್ಲಿ (ಆನ್ ದಿ ನ್ಯಾಚರ್ ಆಫ್ ಮ್ಯಾನ್) ಶರೀರಕ್ರಿಯಾವಿಜ್ಞಾನದ ವಿಕಾಸದಲ್ಲಿ ಮಹತ್ತ್ವದ ಪಾತ್ರ ವಹಿಸಿದ ಆಲೋಚನೆಗಳಿವೆ. ಅರಿಸ್ಟಾಟಲ್ (ಕ್ರಿ.ಪೂ. 384-322) ಮತ್ತು ಗ್ರೀಕ್ ವೈದ್ಯ ಗ್ಯಾಲೆನ್ (ಕ್ರಿ.ಪೂ.ಸು. 130-200) ಈ ಕ್ಷೇತ್ರದ ಬೆಳೆವಣಿಗೆಗೆ ಗಣನೀಯ ಕೊಡುಗೆ ನೀಡಿದ್ದಾರೆ. ದೇಹದ ಪ್ರತಿಯೊಂದು ಅಂಗಕ್ಕೂ ಅದರದ್ದೇ ಆದ ನಿರ್ದಿಷ್ಟ ಕಾರ್ಯವಿದೆ. ಆದ್ದರಿಂದ ಅಂಗ ಸಂರಚನೆ ಯನ್ನು ಅಭ್ಯಸಿಸಿ ಕಾರ್ಯವನ್ನು ನಿಗಮಿಸಲು ಸಾಧ್ಯ ಎಂದು ಅರಿಸ್ಟಾಟಲ್ ಪ್ರತಿಪಾದಿಸಿದ ಮೂಲಸಂಕಲ್ಪವಾದ ಶರೀರಕ್ರಿಯಾವಿಜ್ಞಾನೇತಿಹಾಸದ ಒಂದು ಮುಖ್ಯ ಭಾಗ. ಇದೇ ಗ್ಯಾಲೆನ್‍ನ ಡೆ ಉಸು ಪಾರ್ಟಿಯಮ್ (ಆನ್ ದಿ ಯೂಸ್ ಆಫ್ ಪಾಟ್ರ್ಸ್) ಕೃತಿಗೆ ಮತ್ತು ಶರೀರಕ್ರಿಯೆಗಳಿಗೆ ಸಂಬಂಧಿಸಿದಂತೆ ಇದ್ದ ಅನೇಕ ತಪ್ಪು ಪರಿಕಲ್ಪನೆಗಳ ಮೂಲ. ಉದಾಹರಣೆಗೆ ರಕ್ತದ ಹರಿವಿನ ಉಬ್ಬರವಿಳಿತ ಪರಿಕಲ್ಪನೆ, ರೋಗದ ಶರೀರ ರಸಧಾತು ಸಿದ್ಧಾಂತ ಮತ್ತು ಅರಿಸ್ಟಾಟಲ್‍ನ ಮೂಲಸಂಕಲ್ಪ ವಾದಗಳು ರಕ್ತಪರಿಚಲನೆಗೆ ಸಂಬಂಧಿಸಿದಂತೆ ಗ್ಯಾಲೆನ್‍ನ ತಪ್ಪು ಮೂಲ ತಿಳಿವಳಿಕೆಗೆ ಕಾರಣ. 17ನೆಯ ಶತಮಾನದಲ್ಲಿ ರಕ್ತಪರಿಚಲನೆಗೆ ಸಂಬಂಧಿಸಿದಂತೆ ಬ್ರಿಟಿಷ್ ವೈದ್ಯ ವಿಲಿಯಮ್ ಹಾರ್ವೆಯ (1578-1657) ಅಧ್ಯಯನಗಳು ಪ್ರಕಟವಾಗುವ ವರೆಗೆ ಈ ತಪ್ಪು ತಿಳಿವಳಿಕೆಗಳ ತಿದ್ದುಪಡಿ ಆಗಲಿಲ್ಲ. ಹಾರ್ವೆಯ ಗ್ರಂಥ ಎಕ್ಸರ್ಸಿಟೇಶನ್ ಡೆ ಅನ್ಯಾಟೊಮಿಕ ಡೆ ಮಾಟು ಕಾರ್ಡಿಸ್ ಎಟ್ ಸ್ಯಾಂಗ್ವಿನಿಸ್ ಇನ್ ಆ್ಯನಿಮಲಿಬಿಸ್‍ನ (ಆ್ಯನ್ ಅನ್ಯಾಟೊಮಿಕಲ್ ಡಿಸರ್ಟೇಶನ್ ಅಪಾನ್ ದಿ ಮೂವ್‍ಮೆಂಟ್ ಆಫ್ ದಿ ಹಾರ್ಟ್ ಅ್ಯಂಡ್ ಬ್ಲಡ್ ಇನ್ ಆ್ಯನಿಮಲ್ಸ್) ಪ್ರಕಟವಾದಂದು (1628) ಆಧುನಿಕ ಪ್ರಯೋಗಾಧಾರಿತ ಶರೀರಕ್ರಿಯಾ ವಿಜ್ಞಾನದ ಆರಂಭ. ಹಾರ್ವೆಯ ಅಧ್ಯಯನ ಅಂಗರಚನೆಗೆ ಸಂಬಂಧಿಸಿದ ಪ್ರಯೋಗಗಳನ್ನು ಮಾತ್ರ ಆಧರಿಸಿತ್ತು. 17ನೆಯ ಶತಮಾನದಲ್ಲಿ ಭೌತ ಮತ್ತು ರಸಾಯನವಿಜ್ಞಾನ ಸಂಬಂಧಿತ ಜ್ಞಾನ ಗಣನೀಯ ಪ್ರಮಾಣದಲ್ಲಿ ದ್ದರೂ ಅಂಗರಚನಾವಿಜ್ಞಾನ ಮತ್ತು ವೈದ್ಯವಿಜ್ಞಾನಗಳ ಆಶ್ರಯದಲ್ಲಿಯೇ ಶರೀರಕ್ರಿಯಾವಿಜ್ಞಾನ ವಿಕಸಿಸುತ್ತಿತ್ತು. ಸ್ವಿಸ್‍ಶರೀರಕ್ರಿಯಾ ವಿಜ್ಞಾನಿ ಆಲ್‍ಬ್ರೆಕ್ಟ್ ವಾನ್ ಹಾಲೆರ್ (1708-77) ಶರೀರಕ್ರಿಯಾ ವಿಜ್ಞಾನದ ಮೊದಲನೆಯ ಪ್ರಯೋಗ ಪುಸ್ತಕ ಪ್ರಕಟಿಸಿದ (1747). ತದನಂತರ ಆತ ಎಲಿಮೆಂಟ ಫಿಸಿಯಾಲಜಿಯ ಕಾರ್ಪೊರಿಸ್ ಹ್ಯುಮಾನಿ (ಎಲಿಮೆಂಟ್ಸ್ ಆಫ್ ಹ್ಯುಮನ್ ಫಿಸಿಯಾಲಜಿ) ಎಂಬ ಹೆಸರಿನ ಎಂಟು ಸಂಪುಟಗಳ ಗ್ರಂಥ ಪ್ರಕಟಿಸಿದ. ಲ್ಯಾಟಿನ್ ಭಾಷೆಯ ಈ ಗ್ರಂಥ ಚಲನೆಯಲ್ಲಿರುವ ಅಂಗಸಂರಚನೆಯೇ ಶರೀರಕ್ರಿಯೆ ಎಂಬ ನಿರೂಪಣೆಯ ಪ್ರತಿಪಾದನೆಯಾಗಿತ್ತು. ಶ್ವಸನಕ್ರಿಯೆಯ ಶರೀರಕ್ರಿಯಾ ಸಮಸ್ಯೆಗಳು ಮತ್ತು ಪ್ರಾಣಿಗಳಲ್ಲಿ ಉಷ್ಣೋತ್ಪಾದನೆ ಎಂಬ ವಿಷಯ ಕುರಿತು ಫ್ರೆಂಚ್ ರಸಾಯನವಿಜ್ಞಾನಿ ಆಂಟಾಯಿನ್ ಲಾರೆಂಟ್ ಲೆವಾಸ್ಯೇ(1743-94) ಅನೇಕ ಪ್ರೌಢಪ್ರಬಂಧಗಳನ್ನು ಪ್ರಕಟಿಸಿದ (1782-84). ಈ ವಿಷಯಗಳನ್ನು ತಿಳಿಯಲು ಅಗತ್ಯವಾದ ಬುನಾದಿಯನ್ನು ಇವು ಹಾಕಿದುವು.

	ರಸಾಯನ, ಭೌತ ಮತ್ತು ಅಂಗರಚನಾವಿಜ್ಞಾನದ ವಿಧಾನಗಳನ್ನು ಉಪಯೋಗಿಸಿಕೊಂಡರೂ ತನ್ನದೇ ಆದ ವಿಶಿಷ್ಟತೆಯುಳ್ಳ ಪ್ರತ್ಯೇಕ ವಿಜ್ಞಾನವಾಗಿ ಶರೀರಕ್ರಿಯಾವಿಜ್ಞಾನ ವಿಕಸಿಸಲಾರಂಭಿಸಿದ್ದು 19ನೆಯ ಶತಮಾನದಲ್ಲಿ. ಫ್ರಾನ್ಸ್‍ನ ಕ್ಲಾಡ್ ಬರ್ನಾರ್ಡ್ (1813-78), ಜರ್ಮನಿಯ ಜೊಹಾನ್ಸ್ ಪೀಟರ್ ಮ್ಯೂಲರ್ (1801-58), ಜಸ್ಟಸ್ ವಾನ್ ಲೀಬಿಕ್ (1803-73) ಮತ್ತು ಕಾರ್ಲ್ ಫ್ರೆಡ್ರಿಚ್ ವಿಲ್‍ಹೆಲ್ಮ್ ಲೂಡ್‍ವಿಕ್ (1816-95) ಹಾಗೂ ಇಂಗ್ಲೆಂಡಿನ ಮೈಕೆಲ್ ಫಾಸ್ಟರ್ (1836-1907) ಇವರು ಆಧುನಿಕ ಶರೀರಕ್ರಿಯಾವಿಜ್ಞಾನದ ಆದ್ಯ ಪ್ರವರ್ತಕರು.

	ವಾಸ್ತವವಾಗಿ, ಜೀವಂತ ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾರಂ ಭಿಸಿದ್ದು ಬರ್ನಾರ್ಡ್‍ನ ಅಧ್ಯಾಪಕ ಫ್ರಾಂಕೊಯಿಸ್ ಮಝಾಂಡೀ (1783-1855). ಪ್ರಯೋಗ ಮತ್ತು ವೀಕ್ಷಣೆಗಳ ಫಲಿತಾಂಶಗಳನ್ನು ವೈಜ್ಞಾನಿಕ ಜ್ಞಾನ ಸಂಚಯಕ್ಕೆ ಸಂಯೋಜಿಸಬೇಕಾದ್ದರ ಹಾಗೂ ನೈಸರ್ಗಿಕ ತತ್ತ್ವಶಾಸ್ತ್ರಜ್ಞರ ಸಿದ್ಧಾಂತಗಳನ್ನು ಪ್ರಯೋಗ ಮುಖೇನ ಪರೀಕ್ಷಿಸಬೇಕಾ ದ್ದರ ಮಹತ್ತ್ವವನ್ನು ಗುರುತಿಸಿದವರು ಬರ್ನಾರ್ಡ್ ಮತ್ತು ಮ್ಯೂಲರ್. ಶರೀರಕ್ರಿಯಾವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಪ್ರಚಲಿತ ಚಿಂತನೆಗಳನ್ನು ಪ್ರಯೋಗ ಮುಖೇನ ಪರೀಕ್ಷಿಸಿ ಫಲಿತಾಂಶಗಳನ್ನು ಬರ್ನಾರ್ಡ್ ಪ್ರಕಟಿಸಿದ. ಕೋಶಗಳು ಜೀವಿದೇಹದ ಕಾರ್ಯಘಟಕಗಳು ಎಂಬ ತಥ್ಯವನ್ನು ಆತ ಗುರುತಿಸಿದ್ದಲ್ಲದೆ ಕೋಶಗಳು ಕಾರ್ಯ ನಿರ್ವಹಿಸುವುದು ರಕ್ತ ಹಾಗೂ ದೇಹ ತರಲಗಳು ನಿರ್ಮಿಸಿದ ಆಂತರಿಕ ಪರಿಸರದಲ್ಲಿ ಎಂಬ ಪರಿಕಲ್ಪನೆಯನ್ನು ವಿಕಸಿಸಿದ. ಆಂತರಿಕ ಪರಿಸರದ ಶರೀರಕ್ರಿಯಾನಿ ಯಂತ್ರಣದ ಪರಿಕಲ್ಪನೆ ಶರೀರಕ್ರಿಯಾವಿಜ್ಞಾನ ಮತ್ತು ವೈದ್ಯವಿಜ್ಞಾನಗಳ ಪ್ರಮುಖ ಪರಿಕಲ್ಪನೆಗಳಲ್ಲಿ ಒಂದು. ಅಂಗರಚನಾವಿಜ್ಞಾನ ಮತ್ತು ಪ್ರಾಣಿವಿಜ್ಞಾನ ಮ್ಯೂಲರ್‍ನ ಆಸಕ್ತಿಗಳು. ಬರ್ನಾರ್ಡ್‍ನದಾದರೋ ಮಾನವ ಶರೀರಕ್ರಿಯೆಗಳಿಗೆ ಸೀಮಿತಗೊಳಿಸದೆ ಎಲ್ಲ ಜೀವಿಗಳಿಗೆ ವಿಸ್ತರಿಸಿಕೊಳ್ಳಲು ಇವರೀರ್ವರ ಸಹಭಾಗಿತ್ವವೇ ಕಾರಣ. 

ಆಧುನಿಕ ಶರೀರಕ್ರಿಯಾವಿಜ್ಞಾನದ ವಿಕಾಸಕ್ಕೆ ಉತ್ತೇಜನ ಒದಗಿಸಿದಾತ ಮ್ಯೂಲರ್, ಚಿಂತನೆಗಳನ್ನು ಚಿಂತನೆಗಳನ್ನು ಪೂರೈಸಿದಾತ ಬರ್ನಾರ್ಡ್ ಮತ್ತು ವಿಧಾನಗಳನ್ನು ನೀಡಿದ್ದು ಲೂಡ್‍ವಿಕ್. ಭೌತವಿಜ್ಞಾನಗಳ ಹೊಸ ಚಿಂತನೆಗಳನ್ನೂ ವಿಧಾನಗಳನ್ನೂ ಶರೀರಕ್ರಿಯಾವಿಜ್ಞಾನಕ್ಕೆ ಅನ್ವಯಿ ಸಿದಾತ ಲೂಡ್‍ವಿಕ್. ಸ್ನಾಯು ಚಲನೆ, ರಕ್ತದೊತ್ತಡ ಮತ್ತಿತರ ಶರೀರಕ್ರಿಯಾ ವಿದ್ಯಮಾನಗಳನ್ನು ದಾಖಲಿಸಲು ಇಂದೂ ಉಪಯೋಗಿಸು ತ್ತಿರುವ ಸಿಲಿಂಡರಿನಾಕೃತಿಯ ಡ್ರಮ್, ಅರ್ಥಾತ್ ಕೈಮೊಗ್ರಾಫ್ ಈತನ ಉಪಜ್ಞೆ (1847). ಪರಿಚಲನೆ ಮತ್ತು ಮೂತ್ರೋತ್ಪಾದನೆ ಸಂಬಂಧಿತ ಶರೀರಕ್ರಿಯಾ ವಿಜ್ಞಾನಕ್ಕೂ ಈತನ ಕೊಡುಗೆ ಇದೆ. ಶರೀರಕ್ರಿಯಾವಿಜ್ಞಾನಕ್ಕೆ ಅಂಗರಚನಾ ಆಯಾಮಕ್ಕೆ ಬದಲಾಗಿ ಭೌತಿಕ ಆಯಾಮ ನೀಡುವುದರಲ್ಲಿ ಈತ ಪ್ರಕಟಿಸಿದ (1852, 1856) ಎರಡು ಸಂಪುಟಗಳ ಶರೀರಕ್ರಿಯಾ ವಿಜ್ಞಾನ ಪಠ್ಯಪುಸ್ತಕ ಯಶಸ್ವಿಯಾಯಿತು. 

	ಲೂಡ್‍ವಿಕ್ ಜರ್ಮನಿಯಲ್ಲಿ ಸ್ಥಾಪಿಸಿದ (1869) ಫಿಸಿಯಲಾಜಿಕಲ್ ಇನ್‍ಸ್ಟಿಟ್ಯೂಟ್ ಶರೀರಕ್ರಿಯಾವಿಜ್ಞಾನದಲ್ಲಿ ಸಂಶೋಧನೆಗಳನ್ನು ಮಾಡುವ ಎಲ್ಲ ಸಂಶೋಧನ ಸಂಸ್ಥೆಗಳಿಗೆ ಮಾದರಿಯಾಯಿತು. ಶರೀರಕ್ರಿಯಾ ವಿಜ್ಞಾನದ ಸಮಸ್ಯೆಗಳ ಅಧ್ಯಯನಕ್ಕೆ ರಾಸಾಯನಿಕ ಮಾರ್ಗ ರೂಪಿಸಿದವ ಲೆವಾಸ್ಯೇ. ಅದನ್ನು ವಿಸ್ತರಿಸಿದವ ಲೀಬಿಕ್. ಕಾರ್ಬನಿಕ ರಸಾಯನ ವಿಜ್ಞಾನ ಮತ್ತು ಕೃಷಿ ಹಾಗೂ ಶರೀರಕ್ರಿಯಾವಿಜ್ಞಾನಕ್ಕೆ ಅದರ ಅನ್ವಯಗಳು, ಪ್ರಾಣಿ ರಸಾಯನವಿಜ್ಞಾನ ಕುರಿತು ಲೀಬಿಕ್ ಬರೆದ ಪುಸ್ತಕಗಳು (1840, 1842) ವೈದ್ಯಕೀಯ ಶರೀರಕ್ರಿಯಾವಿಜ್ಞಾನ ಮತ್ತು ಕೃಷಿಗೆ ಸಂಬಂಧಿಸಿದಂತೆ ಹೊಸ ಅಧ್ಯಯನ ಕ್ಷೇತ್ರಗಳನ್ನು ಸೃಷ್ಟಿಸಿದುವು. 

ಲಂಡನ್‍ನ ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರಾಯೋಗಿಕ ಶರೀರಕ್ರಿಯಾ ವಿಜ್ಞಾನದ ಪ್ರಾಧ್ಯಾಪಕನಾದ ಬಳಿಕ (1869) ಫಾಸ್ಟರ್ ವೈದ್ಯವಿಜ್ಞಾನ ವಿದ್ಯಾರ್ಥಿಗಳಿಗಾಗಿ ಆರಂಭಿಸಿದ ಪ್ರಯೋಗಾಲಯ ತರಬೇತಿ ಶರೀರಕ್ರಿಯಾ ವಿಜ್ಞಾನದ ಬ್ರಿಟಿಷ್ ಪರಂಪರೆಗೆ ಕಾರಣವಾಯಿತು. ಕೇಂಬ್ರಿಡ್ಜ್‍ನ ಟ್ರಿನಿಟಿ ಕಾಲೇಜನ್ನು ಪ್ರಾಧ್ಯಾಪಕನಾಗಿ ಪ್ರವೇಶಿಸಿದ ಫಾಸ್ಟರ್, ಅಲ್ಲಿ ಸ್ಥಾಪಿಸಿದ ಶರೀರಕ್ರಿಯಾವಿಜ್ಞಾನ ಪ್ರಯೋಗಾಲಯ ಈ ವಿಜ್ಞಾನದ ಸ್ನಾತಕೋತ್ತರ ಪದವಿ ಶಾಲೆಯಾಗಿ ರೂಪುಗೊಂಡಿತು. ಫಾಸ್ಟರ್ ಪ್ರಕಟಿಸಿದ (1877) ಟೆಕ್ಸ್ಟ್‍ಬುಕ್ ಆಫ್ ಫಿಸಿಯಾಲಜಿ ರಷ್ಯನ್, ಇಟಾಲಿಯನ್ ಮತ್ತು ಜರ್ಮನ್ ಭಾಷೆಗಳ ಅನೇಕ ಆವೃತ್ತಿಗಳೂ ಪ್ರಕಟವಾಗಿವೆ. ಹಿಸ್ಟರಿ ಆಫ್ ಫಿಸಿಯಾಲಜಿ ಎಂಬ ಶೀರ್ಷಿಕೆಯಲ್ಲಿ ಅವನ ಭಾಷಣಗಳು ಪ್ರಕಟವಾಗಿವೆ (1901). ಪ್ರಾಣಿ ಪ್ರಯೋಗಗಳಿಗೆ ಅಧಿಕಾಧಿಕ ವಿರೋಧ ವ್ಯಕ್ತವಾಗತೊಡಗಿದಾಗ ವೃತ್ತಿ ಶರೀರಕ್ರಿಯಾ ವಿಜ್ಞಾನಿಗಳನ್ನು ಸಂಘಟಿಸಿ ಫಿಸಿಯಲಾಜಿಕಲ್ ಸೊಸೈಟಿ ಸ್ಥಾಪಿಸಿದ ಖ್ಯಾತಿಯೂ ಅವನಿಗೆ ಸಲ್ಲುತ್ತದೆ. ಜರ್ನಲ್ ಆಫ್ ಫಿಸಿಯಾಲಜಿ ಪ್ರಕಟಣಾರಂಭವೂ ಅವನ ಕೊಡುಗೆಗಳ ಪೈಕಿ ಒಂದು.

ಜಾನ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯದ ಜೀವವಿಜ್ಞಾನ ಪ್ರಾಧ್ಯಾಪಕ ಹೆನ್ರಿ ನ್ಯುವೆಲ್ ಮಾರ್ಟಿನ್ ಎಂಬಾತ ಫಾಸ್ಟರ್‍ನ ಬೋಧನ ವಿಧಾನಗ ಳನ್ನು ಅಮೆರಿಕಕ್ಕೆ (1876) ಒಯ್ದು ಈತ ಮತ್ತು ಬರ್ನಾರ್ಡ್‍ನ ಶಿಷ್ಯ ಹಾಗೂ ಲೂಡ್‍ವಿಕ್‍ನ ಸಹೋದ್ಯೋಗಿಯಾಗಿದ್ದ ಸಿಲಾಸ್ ವೆಯಿರ್ ಮಿಚೆಲ್ (1829-1914) ಜೊತೆಗೂಡಿ ಅಮೆರಿಕನ್ ಫಿಸಿಯಲಾಜಿಕಲ್ ಸೊಸೈಟಿ ಸ್ಥಾಪಿಸಿದ್ದಲ್ಲದೆ (1887), ಅಮೆರಿಕನ್ ಜರ್ನಲ್ ಆಫ್ ಫಿಸಿಯಾಲಜಿಯ ಪ್ರಕಟಣೆಯನ್ನು ಪ್ರವರ್ತಿಸಿದರು ಕೂಡ. ಜರ್ಮನಿಯ ಇನ್‍ಸ್ಟಿಟ್ಯೂಟ್ ಆಫ್ ಫಿಸಿಯಾಲಜಿಯಲ್ಲಿ ಪ್ರಾಧ್ಯಾಪಕನಾಗಿದ್ದ ಎಡ್ವರ್ಡ್ ಫ್ಲೂಗರ್‍ಗೆ (1829-1910) ಜರ್ಮನಿಯ ಪ್ರಮುಖ ಶರೀರಕ್ರಿಯಾವಿಜ್ಞಾನ ನಿಯತಕಾಲಿಕ ಪ್ರವರ್ತಿಸಿದ (1868) ಖ್ಯಾತಿ ಸಲ್ಲುತ್ತದೆ. ಅರ್ನ್‍ಸ್ಟ್ ಫೆಲಿಕ್ಸ್ ಹಾಪೆಸೆಯ್ಲರ್ (1825-95) ಸ್ಥಾಪಿಸಿದ (1877) ಝೈಟ್‍ಶಿಫ್ಟ್ ಫಾರ್ ಫಿಸಯಾಲಜಿಶೆ ಕೆಮಿ ಸಂಸ್ಥೆ ಶರೀರಕ್ರಿಯಾವಿಜ್ಞಾನದಲ್ಲಿ ರಾಸಾಯ ನಿಕ ವಿಧಾನಗಳ ಅಳವಡಿಕೆಗೆ ಮಾನ್ಯತೆ ಒದಗಿಸಿತು. ಇಂಗ್ಲೆಂಡಿನ ಕೇಂಬ್ರಿಡ್ಜ್‍ನಲ್ಲಿ ಸ್ಥಾಪಿತವಾದ (1898) ಪ್ರಯೋಗಾಲಯ ಫಾಸ್ಟರ್ ಹುಟ್ಟುಹಾಕಿದ ಮಾರ್ಗಕ್ಕೆ ಪೂರಕವಾಗಿ ಈ ವಿಧಾನಗಳ ಅಳವಡಿಕೆ ಯನ್ನು ಮುಂದುವರಿಸಿತು.

20ನೆಯ ಶತಮಾನದಲ್ಲಿ ಶರೀರಕ್ರಿಯಾವಿಜ್ಞಾನ ಒಂದು ಪರಿಪಕ್ವ ವಿಜ್ಞಾನದ ಸ್ಥಾನಮಾನ ಗಳಿಸಿದೆ. ಜೀವರಸಾಯನವಿಜ್ಞಾನ, ಜೀವಭೌತ ವಿಜ್ಞಾನ, ಸಾರ್ವತ್ರಿಕ ಶರೀರಕ್ರಿಯಾವಿಜ್ಞಾನ, ಅಣು ಜೀವವಿಜ್ಞಾನ ಮುಂತಾದ ಅನೇಕ ವಿಜ್ಞಾನ ಶಾಖೆಗಳ ಉದಯಕ್ಕೂ ಕಾರಣವಾಗಿದೆ. ವೈದ್ಯವಿಜ್ಞಾನ ದಲ್ಲಂತೂ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಸ್ತನಿ ಶರೀರಕ್ರಿಯಾವಿಜ್ಞಾನ ಕ್ಷೇತ್ರದಲ್ಲಿ ಅಂಗ ಮತ್ತು ಅಂಗ ವ್ಯವಸ್ಥೆ ದೃಷ್ಟಿಕೋನದಿಂದ ಅನೇಕ ಸಂಶೋಧನೆಗಳಾಗಿವೆ. ತುಲನಾತ್ಮಕ ಅಧ್ಯಯನಗಳು ಮುಂದುವರಿ ಯುತ್ತಿವೆ. ಪ್ರಾಣಿ ಸ್ತರದಲ್ಲಿ ಕೋಶಗಳು, ಊತಕಗಳು, ಅಂಗಗಳು ಮತ್ತು ಅಂಗವ್ಯವಸ್ಥೆಗಳು ಹೇಗೆ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿ ಸುತ್ತವೆ ಎಂಬುದನ್ನು ತಿಳಿಯಲೂ ಸಂಶೋಧನೆಗಳು ಪ್ರಯತ್ನಿಸುತ್ತಿವೆ. ಮಾನಸಿಕ ಕ್ರಿಯೆಗಳ ಶರೀರಕ್ರಿಯಾ ತಳಹದಿಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನಗಳೂ ಆಗುತ್ತಿವೆ. ಮಾನವ ದೇಹದಲ್ಲಾಗುವ ಸಮಸ್ತ ಜೀವಾಧಾರ ಕ್ರಿಯೆಗಳ ಅಧ್ಯಯನ ಈ ವಿಜ್ಞಾನದ ವ್ಯಾಪ್ತಿಯಲ್ಲಿ ಸೇರಿವೆ.
											(ಎಸ್.ಜೆ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ